"ಅವಳ ಹೆಜ್ಜೆ" ಮಹಿಳಾ ಕನ್ನಡ ಕಿರುಚಿತ್ರೋತ್ಸವ - 2025




"ಅವಳ ಹೆಜ್ಜೆ ಕಿರುಚಿತ್ರೋತ್ಸವ-2025"ದ ವಿಶೇಷವೇನೆಂದರೆ, ಮಹಿಳೆಯರೇ ತಯಾರಿಸಿದ ಕನ್ನಡ ಕಿರುಚಿತ್ರಗಳಿಗೆ ಮಾತ್ರ ಮೀಸಲಾಗಿರುವ ಸ್ಪರ್ಧೆಯೊಂದನ್ನು ಕರ್ನಾಟಕದಲ್ಲಿ ಮೊದಲ ಬಾರಿಗೆ ಆಯೋಜಿಸಿದ್ದು. 2025ರ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಕಿರುಚಿತ್ರಗಳ ಸಲ್ಲಿಕೆಗೆ ಅವಕಾಶ ನೀಡಲಾಗಿತ್ತು. ಸ್ಪರ್ಧೆಗೆ ನಿರೀಕ್ಷೆಗೂ ಮೀರಿ ಸ್ಪಂದನೆ ಲಭಿಸಿತ್ತು.. ಅಮೇರಿಕಾದ ಕನ್ನಡತಿಯೊಬ್ಬರು, 14 ವರ್ಷದ ಕಿರಿಯ ಕಲಾವಿದೆಯೂ ಸೇರಿದಂತೆ, ರಾಜ್ಯಾದ್ಯಂತ ವಿವಿಧ ಹಿನ್ನೆಲೆಯ ಮಹಿಳೆಯರು ನಿರ್ದೇಶಿಸಿದ ಸುಮಾರು 60 ಕಿರುಚಿತ್ರಗಳು ಸಲ್ಲಿಕೆಯಾಗಿದ್ದವು.
ಆಯ್ಕೆ ಅತ್ಯಂತ ಸ್ಪರ್ಧಾತ್ಮಕವಾಗಿದ್ದು, ಸುನಯನ ಸುರೇಶ, ಮಧು ದೈತೋಟ, ಸಂಜೋತಾ ಭಂಡಾರಿ, ಶ್ವೇತ್ ಪ್ರಿಯಾ ನಾಯಕ್, ಗೌರಿ ನೀಲಾವರ್, ಅಖಿಲಾ ವಿದ್ಯಾಸಂದ್ರ, ಪೂಜಾ ಸುಧೀರ್, ಪೂರ್ಣಿಮಾ ಮಾಳಗಿಮನಿ ಇವರನ್ನು ಒಳಗೊಂಡ ಪ್ರತಿಷ್ಠಿತ ತೀರ್ಪುಗಾರರ ತಂಡ ಸೂಕ್ಷ್ಮವಾಗಿ ಪರಿಗಣಿಸಿ ಆಯ್ದ ಕಿರುಚಿತ್ರಗಳ ಮೊದಲ ಪ್ರದರ್ಶನ ಮತ್ತು ಪ್ರಶಸ್ತಿ ವಿಜೇತರ ಘೋಷಣೆ ಜೂನ್ 14, 2025 ರಂದು ಬೆಂಗಳೂರು ಇಂಟರ್ ನ್ಯಾಷನಲ್ ಸೆಂಟರ್ (BIC) ನಲ್ಲಿ ನಡೆಯಿತು.
ಚಿತ್ರೋತ್ಸವದ ಮುಖ್ಯ ಅತಿಥಿ, ಖ್ಯಾತ ನಿರ್ದೇಶಕಿ ಡಿ. ಸುಮನ್ ಕಿತ್ತೂರು ಅವರ ಸಮಕ್ಷಮದಲ್ಲಿ ವಿಜೇತರ ಘೋಷಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಮೊದಲ ಬಹುಮಾನ ₹1 ಲಕ್ಷ ನಗದು ಮತ್ತು "ಅವಳ ಹೆಜ್ಜೆ" ಪ್ರಶಸ್ತಿಯನ್ನು ಪಡೆದ ಕನ್ನಡ ಕಿರುಚಿತ್ರ ಕವಿತಾ ಬಿ ನಾಯಕ್ ನಿರ್ದೇಶನದ "ಅನ್ ಹರ್ಡ್ ಎಕೋಸ್". ಈ ಚಿತ್ರವು ಪ್ರೇಕ್ಷಕರ ಆಯ್ಕೆ ಬಹುಮಾನವನ್ನು ಸಹ ಪಡೆದುಕೊಂಡಿದ್ದು, ಅದರ ಬಲವಾದ ಭಾವನಾತ್ಮಕ ಸಂಪರ್ಕಕ್ಕೆ ಸಾಕ್ಷಿಯಾಗಿದೆ.
ಕ್ಷಮಾ ಅಂಬೆಕಲ್ಲು ಅವರ ಕಿರುಚಿತ್ರ "ಪುಷ್ಪ", ವಿದ್ಯಾರ್ಥಿನಿ ನಿರ್ದೇಶಕಿ ಎಂಬ ವಿಶೇಷ ವರ್ಗದಲ್ಲಿ ನಗದು ಬಹುಮಾನ ಪಡೆಯಿತು. ಚೊಚ್ಚಲ ನಿರ್ದೇಶನದ ಇತರ ಮೂರು ಕಿರುಚಿತ್ರಗಳು ಸಹ ನಗದು ಬಹುಮಾನಗಳನ್ನು ಪಡೆದಿವೆ: ಮಂದಾರ ಬಟ್ಟಲಹಳ್ಳಿ ನಿರ್ದೇಶನದ “ದಿ ಲಾಸ್ಟ್ ಹ್ಯಾಪಿ ಕಸ್ಟಮರ್” (2024), ಸಿಂಚನಾ ಶೈಲೇಶ್ ನಿರ್ದೇಶನದ “ಕೇಕ್‌ವಾಕ್” (2025) ಮತ್ತು ಸತ್ಯ ಪ್ರಮೋದ ಎಂ.ಎಸ್ ನಿರ್ದೇಶನದ “ಆನ್‌ಲೈನ್” (2025).
ಹಾವೇರಿ ಜಿಲ್ಲೆಯ ರೈತ ಮಹಿಳೆ ರೇಣುಕಾ ಯಲ್ಲಪ್ಪ ಮಲ್ಲಿಗಾರ್ ನಿರ್ಮಿಸಿದ “ನೀರೆಲ್ಲವೂ ತೀರ್ಥ” (2025) ಎಂಬ ಕಿರುಚಿತ್ರವನ್ನು ಸ್ಪರ್ಧಾತ್ಮಕವಲ್ಲದ ವಿಭಾಗದಲ್ಲಿ ಪ್ರದರ್ಶಿಸಲಾಯಿತು.
ಎಂಟು ಆಕರ್ಷಕ ಕಿರುಚಿತ್ರಗಳನ್ನು ಪ್ರದರ್ಶಿಸಿದ ಈ ಉತ್ಸವವು ಪ್ರೇಕ್ಷಕರಿಂದ ಕಿಕ್ಕಿರಿದು ತುಂಬಿತ್ತು. ಎಂಟು ನಿರ್ದೇಶಕಿಯರೊಂದಿಗಿನ ಪ್ರಶ್ನೋತ್ತರದಲ್ಲಿ ಪ್ರೇಕ್ಷಕರು ಉತ್ಸಾಹಭರಿತ, ಚಿಂತನಶೀಲ ಪ್ರಶ್ನೆಗಳನ್ನು ಅವರ ಮುಂದಿಟ್ಟರು.
ಚಿತ್ರೋತ್ಸವದ ಪ್ರಮುಖ ಆಕರ್ಷಣೆ, ಪತ್ರಕರ್ತೆ ಸುನಯನ ಸುರೇಶ್ ನಿರ್ವಹಿಸಿದ ಚರ್ಚಾಗೋಷ್ಠಿ “ಕನ್ನಡ ಸಿನಿಮಾದಲ್ಲಿ ಮಹಿಳಾ ಧ್ವನಿ” ಯಲ್ಲಿ ಖ್ಯಾತ ಚಲನಚಿತ್ರ ನಿರ್ದೇಶಕಿ ರೂಪಾ ರಾವ್ (ಗಂಟು ಮೂಟೆ), ಟೆಂಟ್ ಸಿನೆಮಾ ಶಾಲೆಯ ಸ್ಥಾಪಕ ನಿರ್ದೇಶಕಿ ಶೋಭಾ ಸಿ.ಎಸ್. ಮತ್ತು ಮುಖ್ಯ ಅತಿಥಿ ಡಿ. ಸುಮನ್ ಕಿತ್ತೂರು ಭಾಗವಹಿಸಿದ್ದರು.
ತಮ್ಮ ಜಾತಕಗಳು ಹೊಂದಿಕೆಯಾಗಲಿಲ್ಲ ಎಂಬ ಕಾರಣಕ್ಕೆ ತನ್ನ ಚಿತ್ರಕ್ಕೆ ಹಣಕಾಸು ಒದಗಿಸಲು ನಿರಾಕರಿಸಿದ ನಿರ್ಮಾಪಕರ ಬಗ್ಗೆ ಸುಮನ್ ಕಿತ್ತೂರು ಒಂದು ಸ್ವಾರಸ್ಯಕರ ಅನುಭವವನ್ನು ಹಂಚಿಕೊಂಡರು - ಇದು ನಿರ್ದೇಶಕರಿಗೆ ಇರುವ ತರ್ಕಹೀನ ಅಡೆತಡೆಗಳ ಉದಾಹರಣೆಯಾಗಿದೆ.
ರೂಪಾ ರಾವ್ ಅವರು ಚಲನಚಿತ್ರೋದ್ಯಮದಲ್ಲಿ ಎದುರಿಸಿದ ಲಿಂಗ ತಾರತಮ್ಯದ ಬಗ್ಗೆ ಮುಕ್ತವಾಗಿ ಮಾತನಾಡಿ,“ನಿರ್ಮಾಪಕರು ಮತ್ತು ವಿತರಕರು ನನ್ನನ್ನು ನೇರವಾಗಿ ಉದ್ದೇಶಿಸಿ ಮಾತನಾಡುವ ಬದಲು ನನ್ನ ಪುರುಷ ಸಹಾಯಕರೊಂದಿಗೆ ಮಾತನಾಡುತ್ತಿದ್ದರು. ಹಲವು ನಿರಾಕರಣೆಗಳು ಮತ್ತು ಆರ್ಥಿಕ ಸಂಕಷ್ಟಗಳ ನಡುವೆಯೂ ‘ಹುಚ್ಚು ಮತ್ತು ಉತ್ಸಾಹ’ ಇದ್ದರೆ ಮಾತ್ರ ಚಲನಚಿತ್ರ ನಿರ್ದೇಶಕರು ಮುಂದುವರೆಯಲು ಸಾಧ್ಯ” ಎಂದರು.
ಮೊದಲ ಪ್ರದರ್ಶನದಲ್ಲಿ ಲಭಿಸಿದ ಆದರಣೀಯ ಪ್ರತಿಕ್ರಿಯೆ ಮತ್ತು ಬೆಂಬಲದಿಂದ, ಕಿರುಚಿತ್ರಗಳ ಪುನರ್‌ಪ್ರದರ್ಶನಕ್ಕೆ ಅವಕಾಶ ದೊರೆಯಿತು. ಜುಲೈ 12, 2025 ರಂದು ಬೆಂಗಳೂರಿನ ಬಸವನಗುಡಿಯಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ (IIWC) ನಲ್ಲಿ ಎರಡನೇ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಮೂರನೇ ಪ್ರದರ್ಶನ ಭಾನುವಾರ, ಸೆಪ್ಟೆಂಬರ್ 21, 2025 ರಂದು ಬೆಂಗಳೂರಿನ ಸುಚಿತ್ರ ಸಿನಿಮಾ ಮತ್ತು ಸಂಸ್ಕೃತಿ ಅಕಾಡೆಮಿಯಲ್ಲಿ ಏರ್ಪಡಿಸಲಾಗಿತ್ತು.







































